ಡಾಲ್ಮೆನ್

	ಚಪ್ಪಟೆಯಾದ ಕಲ್ಲುಚಾವಣಿಗೆ ಆಸರೆಯಾಗಿ ಹಲವು ಬೃಹತ್ ಶಿಲಾ ಚಪ್ಪಡಿಗಳನ್ನು ಏಣು ಮೇಲಾಗಿ ನಿಲ್ಲಿಸಿ, ಪಶ್ಚಿಮ ಯೂರೋಪ್, ಮೆಡಿಟರೇನಿಯನ್ ತೀರ, ಇರಾನ್, ದಕ್ಷಿಣ ಭಾರತ, ಜಪಾನ್, ಇಂಡೋನೇಷ್ಯ ಮುಂತಾದ ಪ್ರದೇಶಗಳಲ್ಲಿ ನೂತನ ಶಿಲಾಯುಗದಿಂದ ಇತಿಹಾಸಯುಗದ ಆದಿ ಭಾಗದವರೆಗಿನ ಕಾಲದಲ್ಲಿ ನಿರ್ಮಿಸಲಾಗುತ್ತಿದ್ದ ಬೃಹತ್ ಶಿಲಾ ಸಂಸ್ಕøತಿಯ ಗೋರಿ. ಈ ಗೋರಿಗಳು ನೆಲದ ಮೇಲೆ ಇಟ್ಟ ಮೇಜಿನ ಹಾಗೆ ಕಾಣುವುವಾದ್ದರಿಂದ ಇವಕ್ಕೆ ಡಾಲ್ಮೆನ್‍ಗಳೆಂಬ ಹೆಸರು ಬಂದಿದೆಯೆಂದು ಹೇಳಲಾಗಿದೆ. ಈ ಶಬ್ದ ಕೆಲ್ಟಿಕ್ ಮೂಲದ್ದು. ವೆಲ್ಷ್ ಭಾಷೆಯಲ್ಲಿ ಇದಕ್ಕೆ ಕ್ರಾಮ್ಲೆಕ್ ಎಂದು ಹೆಸರು. ಈ ಗೋರಿಗಳನ್ನು ಕಟ್ಟುವ ರೀತಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿತ್ತು. ದಕ್ಷಿಣ ಭಾರತದಲ್ಲಿ ದೊಡ್ಡ ದೊಡ್ಡ ನಾಲ್ಕು ಒರಟು ಕಲ್ಲುಚಪ್ಪಡಿಗಳನ್ನು ಒಂದೊಂದು ಬದಿಯಲ್ಲಿ ಒಂದೊಂದರಂತೆ ಆಯಾಕಾರವಾಗಿ ಅಥವಾ ಚೌಕೋನವಾಗಿ ನೆಟ್ಟಗೆ ನಿಲ್ಲಿಸಿ ಅವುಗಳ ಮೇಲೆ ಅಸಮವಾಗಿ ದಪ್ಪ ಕಲ್ಲುಚಪ್ಪಡಿಯೊಂದನ್ನು ಎಲ್ಲ ಬದಿಗಳಲ್ಲೂ ಹೊರಚಾಚಿಕೊಂಡಿರುವ ಹಾಗೆ ಅಡ್ಡಲಾಗಿ ಇಟ್ಟು ಇದನ್ನು ನಿರ್ಮಿಸಲಾಗುತ್ತಿತ್ತು.

	ಮಾಸ್ಕಿ, ಪುದುಚೇರಿ, ಯೇಲೇಶ್ವರಂ, ಪೋಚಂಪಾಡುಗಳಲ್ಲಿ ಇಂಥ ಗೋರಿಗಳನ್ನು ಉತ್ಖನನ ಮಾಡಲಾಗಿದೆ. ಇವುಗಳಲ್ಲಿ ಎರಡು ಅಥವಾ ಹೆಚ್ಚು ವ್ಯಕ್ತಿಗಳ ಅಸ್ಥಿಚೂರುಗಳು, ಕೆಂಪು ಮತ್ತು ಕಪ್ಪು-ಕೆಂಪು ಬಣ್ಣದ ವಿಧವಿಧವಾದ ಹಲವು ಮೃತ್‍ಪಾತ್ರೆಗಳು, ಕಬ್ಬಿಣದ ಉಪಕರಣಗಳು ಮತ್ತು ಆಯುಧಗಳು, ಅಪರೂಪವಾಗಿ ಚಿನ್ನದ ಮತ್ತು ಕಲ್ಲಿನ ಮಣಿಗಳು ಕಂಡುಬಂದಿವೆ. ಇವುಗಳ ಕಾಲ ಸ್ಥೂಲವಾಗಿ ಕ್ರಿ.ಪೂ.7ನೆಯ ಶತಮಾನದಿಂದ ಕ್ರಿ.ಶ.1ನೆಯ ಶತಮಾನದವರೆಗೆ.
(ಎ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ